ಫೆಡರಲಿಸ್ಟ್ ಪಕ್ಷ	- ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಥಮ ಅಧ್ಯಕ್ಷನಾಗಿದ್ದ ಜಾರ್ಜ್ ವಾಷಿಂಗ್ಟ್‍ನ್ನನ ಸಂಪುಟದಲ್ಲಿ ಒಡಕು ತಲೆದೋರಿದಾಗ ಅಲೆಗ್ಸಾಂಡರ್ ಹ್ಯಾಮಿಲ್ಟನನ ಭಾವನೆಗಳನ್ನು ಪ್ರತಿಪಾದಿಸಲು ಹುಟ್ಟಿಕೊಂಡ ಪಕ್ಷ. ಇದು ಸಂಪ್ರದಾಯವಾದಿ ಪಕ್ಷ. ಬಲಿಷ್ಠ ಕೇಂದ್ರ ಸರ್ಕಾರ ಇರಬೇಕೆಂದು ಇದು ಪ್ರತಿಪಾದಿಸುತ್ತಿತ್ತು. ಕೈಗಾರಿಕೆಗಳಿಗೆ ಪ್ರೋತ್ಸಾಹ ದೊರಕಬೇಕೆಂಬುದು ಇದರ ಆಶಯ. ಇದು ಬೃಹತ್ ವ್ಯಾಪಾರಿಗಳು ಮತ್ತು ಜಮೀನ್ದಾರರ ಪರವಾಗಿತ್ತು. ಸುವ್ಯವಸ್ಥಿತವಾದ, ಶಿಸ್ತಿನಿಂದ ಕೂಡಿದ ಸಮಾಜ ಸ್ಥಾಪನೆ ಇದರ ಗುರಿ. ವಿದೇಶಾಂಗ ವ್ಯವಹಾರದಲ್ಲಿ ಇದು ಬ್ರಿಟನ್ನಿನ ಪರವಾಗಿತ್ತು. ನ್ಯೂ ಇಂಗ್ಲೆಂಡ್ ಪ್ರದೇಶದಲ್ಲಿ ವಿಶೇಷವಾಗಿ ಇದು ಪ್ರಭಾವಶಾಲಿಯಾಗಿತ್ತು. ಮಧ್ಯ ಅಟ್ಲಾಂಟಿಕ್ ರಾಜ್ಯಗಳಲ್ಲೂ ಇದು ಜನಪ್ರಿಯವಾಗಿತ್ತು. 1800ರಲ್ಲಿ ಡೆಮೊಕ್ರಾಟರು ಜಯಗಳಿಸಿದ ಮೇಲೆ ಇದು ಸ್ಥಳೀಯ ಪಕ್ಷವಾಗಿ ಮುಂದುವರಿಯಿತು. ಆದರೆ ಪ್ರತಿಗಾಮಿಗಳು ಇದರ ನಾಯಕತ್ವ ಪಡೆದುಕೊಂಡರು. 1824ರ ಚುನಾವಣೆಗಳ ವೇಳೆಗೆ ಈ ಪಕ್ಷ ಹೇಳಹೆಸರಿಲ್ಲದಂತಾಗಿತ್ತು.
(ಟಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ